ಕೇಶವಮೂರ್ತಿ, ಎಚ್ ಆರ್

	1919 ನೃತ್ಯಗುರು, ಕಥಕ್ ಮತ್ತು ಭರತನಾಟ್ಯದಲ್ಲಿ ಪರಿಣಿತರು. ಅವರು ನಡೆಸುತ್ತಿರುವ ಕೇಶವ ನೃತ್ಯಶಾಲೆಯ ವೈಶಿಷ್ಟ್ಯವೆಂದರೆ, ನೃತ್ಯ-ರೂಪಕಗಳ ಸೃಜನ. ಕೇಶವಮೂರ್ತಿ ಹುಟ್ಟಿದ್ದು ಚಿಕ್ಕಮಗಳೂರು ತಾಲ್ಲೂಕಿನ ಹೋಚಿಹಳ್ಳಿ ಗ್ರಾಮದಲ್ಲಿ-1919ರಲ್ಲಿ. ತಂದೆ ರಾಮಸ್ವಾಮಿ ಮತ್ತು ತಾಯಿ ಸೀತಮ್ಮ. ಬಡತನದ ಬೇಗೆಯಿಂದ, ವಿದ್ಯಾಭ್ಯಾಸ ಮಾಡಲೆಂದು ತುಮಕೂರಿನ ಚಿಕ್ಕಪ್ಪನ ಮನೆಗೆ ಬಂದರು. ಕಾರ್ಪಣ್ಯದ ಜೀವನ ಸಾಗಿಸುತ್ತ ಎಸ್.ಎಸ್.ಎಲ್.ಸಿ ಮುಗಿಸಿದರು. ಮುಂದೆ ಓದಲು ಚೈತನ್ಯವಿಲ್ಲ. ಚಿಕ್ಕಪ್ಪನವರ ಬಳಿ ಸ್ವಲ್ಪ ಸಂಸ್ಕøತಾಭ್ಯಾಸವೂ ನಡೆಯಿತು. ಆಸ್ಥಾನ ವಿದ್ವಾನರಾಗಿದ್ದ ಸಿ.ಎಸ್. ಶ್ರೀನಿವಾಸಮೂರ್ತಿ ಅವರ ಬಳಿ ಕೊಳಲುವಾದನ ಕಲಿಯಲು ಆರಂಭಿಸಿದರು. ತುಮಕೂರಿನ ನಾಟಕ ಕಂಪನಿಗಳ ಸಂಪರ್ಕ ಬೆಳೆಯಿತು. ಸಂಗೀತ, ನಾಟಕಗಳಲ್ಲಿ ಆಸಕ್ತಿ, ನೃತ್ಯ ಕಲಿಯಲು ಪ್ರೇರಣೆ ನೀಡಿತು. ವಿವಾಹದ ನಂತರ ಪತ್ನಿಯೊಡಗೂಡಿ ಬೆಂಗಳೂರಿಗೆ ಬಂದು, ಶಿಶುವಿಹಾರ ಒಂದರಲ್ಲಿ (1943) ಅಧ್ಯಾಪಕರಾದರು. 

	ಕೇಶವಮೂರ್ತಿ, ಮೊದಲಿಗೆ ಗುರು ಸೋಹನಲಾಲ್ ಬಳಿ ಕಥಕ್ ಅನಂತರ ಗುಂಡಪ್ಪನವರ ಬಳಿ ಭರತನಾಟ್ಯ ಶಿಕ್ಷಣ ಪಡೆದರು. ಆರು ವರ್ಷಗಳ ಸಾಧನೆಯ ನಂತರ, `ಕೇಶವ ನೃತ್ಯಶಾಲೆ ಆರಂಭಿಸಿದರು. ಕೇಶವ ನೃತ್ಯಶಾಲೆಯಲ್ಲಿ ಸೆಕೆಂಡರಿ ಎಜುಕೇಶನ್ ಬೋರ್ಡ್ ನಡೆಸುವ ನೃತ್ಯ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತಿ ನೀಡುವ ಕಾರ್ಯಕ್ರಮ ಅನೇಕರನ್ನು ಆಕರ್ಷಿಸಿತು. ಡಿಪ್ಲೋಮ ಮತ್ತು ಡಿಗ್ರಿಕೋರ್ಸ್‍ಗಳೂ ಕಾಲಕ್ರಮೇಣ ಆರಂಭವಾದವು.

	ಕೇಶವ ನೃತ್ಯಶಾಲೆದಲ್ಲಿ ಪ್ರದರ್ಶಿಸಲಾಗುವ ಗೀತೆ ನೃತ್ಯಗಳಿಗೆ ಪ್ರಸಿದ್ಧ ಪ್ರತಿವರ್ಷ ನಡೆಸುವ ವಾರ್ಷಿಕೋತ್ಸವ, ಅವುಗಳೆಲ್ಲಾ ಕೇಶವಮೂರ್ತಿ ಆಯೋಜಿಸಿದ ನೃತ್ಯನಾಟಕಗಳೇ, ಸಾಮಾಜಿಕ, ಚಾರಿತ್ರಿಕ, ಜಾನಪದ ವಸ್ತು ವಿಶೇಷವುಳ್ಳ ನಾಟಕಗಳು, ಸಾಹಿತ್ಯ, ವಿನ್ಯಾಸ ಕೇಶವಮೂರ್ತಿಯವರದೇ. ಈ ಗೀತನೃತ್ಯಗಳಲ್ಲಿ ಹೆಚ್ಚು ಗಮನ ಸೆಳೆದ ರೂಪಕಗಳೆಂದರೆ `ಕನ್ನಡ ಕವಿಪರಂಪರೆ ನೃತ್ಯಮಾಲಿಕೆ. ಆದಿಕವಿ ಪಂಪನ 'ಭರತ-ಬಾಹುಬಲಿ, ರನ್ನನ `ಗದಾಯುದ್ಧ, ನಾಗವರ್ಮನ `ಕಾದಂಬರಿ', ಜನ್ನನ `ಯಶೋಧರ ಚರಿತ್ರೆ, ನಾಗಚಂದ್ರನ `ರಾಮಚಂದ್ರ ಚರಿತ ಪುರಾಣ', ನೇಮಿಚಂದ್ರನ `ಲೀಲಾವತಿ ಪ್ರಬಂಧ, ಹರಿಹರನ `ಗಿರಿಜಾ ಕಲ್ಯಾಣ', ರಾಘವಾಂಕನ `ಹರಿಶ್ಚಂದ್ರ ಕಾವ್ಯ, ಚಾಮರಸನ `ಪ್ರಭುಲಿಂಗ ಲೀಲೆÉ, ಕುಮಾರವ್ಯಾಸನ `ಭಾರತ ಇವು ರಸಿಕರ ಮೆಚ್ಚುಗೆಗೆ ಪಾತ್ರವಾದ ನೃತ್ಯರೂಪಕಗಳು. ಕನ್ನಡ, ಸಂಸ್ಕøತ ಸಾಹಿತ್ಯ ಭಂಡಾರದಿಂದ ಆಯ್ದ ಸುಮಾರು 30 ನೃತ್ಯನಾಟಕಗಳು. ನಾಡಿನಾದ್ಯಂತ ಪ್ರದರ್ಶನಗೊಂಡಿವೆ.

	1999ರಲ್ಲಿ ನಡೆದ ಕೇಶವ ನೃತ್ಯಶಾಲೆಯ ಸುವರ್ಣ ಮಹೋತ್ಸವ, ಒಂದು ವರ್ಷ ಪೂರ್ತಿ ಆಚರಿಸಲಾದ ಉತ್ಸವ. 500ಕ್ಕೂ ಹೆಚ್ಚು ಮಂದಿ ನರ್ತಕರು ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಹಿರಿಯ ಚೇತನಗಳಿಗೆ ನಮನ ಕಾರ್ಯಕ್ರಮವೂ ಇದ್ದದ್ದು ಒಂದು ವಿಶೇಷ.

	ಕೇಶವಮೂರ್ತಿಗಳು ಬರೆದಿರುವ `ನಾಟ್ಯವಿಚಾರ ಸಂಗ್ರಹ, ಅವರ ಭಾಷಣಗಳ. ಚಿಂತನೆಗಳ ಸಂಗ್ರಹ. ಭರತನಾಟ್ಯಕ್ಕೆ ಬೇಕಾದ ಜತಿಸ್ವರ, ಶೃಂಗಾರ ಪದಗಳು, ಶಬ್ದ, ವರ್ಣ, ತಿಲ್ಲಾನ, ನವರಸ ರಾಮಾಯಣಗಳನ್ನು ರಚಿಸಿದ್ದಾರೆ. ನೃತ್ಯಶಿಕ್ಷಣಕ್ಕೆ ಸಂಬಂಧಪಟ್ಟಂತೆ ಪಠ್ಯವಿಷಯವನ್ನು ನಿರ್ದಿಷ್ಟಗೊಳಿಸುವುದರ ಜೊತೆಗೆ, ನೃತ್ಯ ಪರೀಕ್ಷೆಗಳ ಮೌಲ್ಯಮಾಪಕರೂ ಅಗಿದ್ದರು. ನೃತ್ಯಕಲಾವಿದರ ಪುರೋಭಿವೃದ್ಧಿಗಾಗಿ `Àಕರ್ನಾಟಕ ನೃತ್ಯಕಲಾ ಪರಿಷತ್ತು ಸಂಘಟಿಸಿದ ಶ್ರೇಯಸ್ಸು ಕೇಶವಮೂರ್ತಿ ಅವರದು.

	ಸಂಗೀತ ನೃತ್ಯಕಲಾ ಅಕಾಡೆಮಿಯ `ಕರ್ನಾಟಕ ಕಲಾ ತಿಲಕ ಪ್ರಶಸ್ತಿ(1981), ಕರ್ನಾಟಕ ನೃತ್ಯ ಕಲಾಪರಿಷತ್ತಿನ `ನೃತ್ಯ ಕಲಾ ಶಿರೋಮಣಿ ಪ್ರಶಸ್ತಿ(1993), ಬೆಂಗಳೂರು ಗಾಯನ ಸಮಾಜದ ವರ್ಷದ ಕಲಾವಿದ ಪುರಸ್ಕಾರ(1994), ಕರ್ನಾಟಕ ಸರಕಾರದ ಪ್ರತಿಷ್ಠಿತ `ನಾಟ್ಯರಾಣಿ ಶಾಂತಲಾ ಪ್ರಶಸ್ತಿ (1998) ಮತ್ತು `ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2000) ಇವೇ ಮೊದಲಾದ ಪ್ರಶಸ್ತಿಗಳಿಗೆ ಕೇಶವಮೂರ್ತಿ ಭಾಜನರಾಗಿದ್ದಾರೆ.						(ಎಂ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ